ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ಕಳೆದ ವರ್ಷ ಸಂಚಲನ ಸೃಷ್ಟಿಸಿತ್ತು. ಬ್ರಿಟಿಷ್ ಸೋಸಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಜಾರಾ ಪಟೇಲ್ ಅವರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಮಾರ್ಫಿಂಗ್ ಮಾಡಿ ವೈರಲ್ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಆಂಧ್ರಪ್ರದೇಶ ಮೂಲದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೀಪ್‌ಫೇಕ್ ವಿಡಿಯೋದ ಮಾಸ್ಟರ್ ಮೈಂಡ್ ಎಮಾನಿ ನವೀನ್‌ನನ್ನು ಶನಿವಾರ ಬಂಧಿಸಲಾಗಿದೆ.
ಇಂಜಿನಿಯರ್ ಆಗಿರುವ ಆತ ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಪೇಜ್ ಹೊಂದಿದ್ದು, ಫಾಲೋವರ್‌ಗಳನ್ನು ಹೆಚ್ಚಿಸಲು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದಾನೆ. ನವೀನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ನಲ್ಲಿ ಬಿ.ಟೆಕ್ ಅನ್ನು ಮಾಡಿದ್ದು, 2019 ರಲ್ಲಿ ಆನ್‌ಲೈನ್ ಕಲಿಕಾ ವೇದಿಕೆಯಾದ ಗೂಗಲ್ ಗ್ಯಾರೇಜ್‌ನಿಂದ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಸರ್ಟಿಫಿಕೇಟ್ ಪಡೆದಿದ್ದಾನೆ ಎಂದು ತಿಳಿದುಬಂದಿದೆ.
ಅಮಿತಾಭ್ ಅಂತಹ ದಿಗ್ಗಜರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಆ ಪೇಜ್ನಿಂದ ವಿಡಿಯೊ ಡಿಲೀಟ್ ಮಾಡಿ,ಪೇಜ್ ಹೆಸರನ್ನು ಬದಲಾಯಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಅಷ್ಟರಲ್ಲಾಗಲೇ ಈ ವಿಡಿಯೋ ವೈರಲ್ ಆಗಿ, ಸಹಸ್ರಾರು ಸಂಖ್ಯೆಯಲ್ಲಿ ಡೌನ್ ಲೋಡ್ ಆಗಿತ್ತು.
ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಇಮಾನಿ ನವೀನ್ ಗುಂಟೂರಿನ ಪೆದನಾಡಿಪಾಡು ಗ್ರಾಮದವನು. ಆತ ರಶ್ಮಿಕಾ ಅವರ ಅಭಿಮಾನಿಯಾಗಿದ್ದು, ಅವರ ಫ್ಯಾನ್ ಪೇಜ್ ಒಂದರಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ರಶ್ಮಿಕಾ ಈ ಡೀಪ್‌ಫೇಕ್ ವಿಡಿಯೋ ಮಾಡಿದ್ದಾನೆ. ಅಕ್ಟೋಬರ್ 13, 2023 ರಂದು ಡೀಪ್‌ಫೇಕ್ ವೀಡಿಯೊವನ್ನು ಎಡಿಟ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ. ಈ ಯೋಜನೆಯು ಎರಡು ವಾರಗಳಲ್ಲಿ ಫಾಲೋವರ್ಸ್ ಸಂಖ್ಯೆ 90,000 ರಿಂದ 1,08,000 ಕ್ಕೆ ಹೆಚ್ಚಾಗಿತ್ತು ಎಂದು ಹೇಳಿಕೊಂಡಿದ್ದಾನೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 465 ಮತ್ತು 469 ರ ಅಡಿಯಲ್ಲಿ ಫೋರ್ಜರಿ ಮತ್ತು ವ್ಯಕ್ತಿಯ ಮಾನನಷ್ಟಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ವಿಭಾಗ 66C ಮತ್ತು ವಿಭಾಗ 66E (ಗೌಪ್ಯತೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಅವರನ್ನು ವಿಚಾರಣೆಗಾಗಿ ಪೊಲೀಸರು ದೆಹಲಿಗೆ ಕರೆದೊಯ್ಯಲಾಗಿದೆ.