ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ನೆರವಿಗೆ ಮುಂದಾಗಿದ್ದು, ಬ್ರಾಹ್ಮಣ ವಿದ್ಯಾರ್ಥಿಗಳಿಗೆ 1 ಲಕ್ಷದ ವರೆಗೆ ಸಾಂದೀಪನಿ ಶಿಷ್ಯ ವೇತನ, ಸ್ವಾವಲಂಬಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಜನವರಿ 31 ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು ಯೋಜನೆಗೆ ಅರ್ಹವಾಗಿರುವ ಬ್ರಾಹ್ಮಣರು ಉಪಯೋಗ ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.
ಸ್ವಯಂ ಉದ್ಯೋಗ, ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ನಿಂದ ಸಾಲ ಪಡೆದರೆ, ಸಾಲದ ಪೈಕಿ ಶೇಕಡಾ 20 ರಷ್ಟು ಹಣವನ್ನು ಸರ್ಕಾರ “ಸ್ವಾವಲಂಬಿ” ಯೋಜನೆ ಅಡಿಯಲ್ಲಿ ಸಹಾಯಧನ ನೀಡಲಿದೆ. ಗರಿಷ್ಠ 5 ಲಕ್ಷದ ವರೆಗೆ ಸಹಾಯಧನ ನೀಡಲಾಗುತ್ತದೆ.
ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಹೆಚ್ಚಿನ ಘಟಕ ವೆಚ್ಚವಿರುವ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದವರು ಈ ಯೋಜನೆ ಅರ್ಹರಾಗಿರುತ್ತಾರೆ.