ಬೆಂಗಳೂರು: 75ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ರಾಜ್ಯಪಾಲರು ತೆರೆದ ಜೀಪ್ನಲ್ಲಿ ಪರೇಡ್ ವೀಕ್ಷಣೆ ಮಾಡಿದರು.
195 ಬರ ಪೀಡಿತ ತಾಲ್ಲೂಕುಗಳಲ್ಲಿ ಬರಪರಿಹಾರಕ್ಕೆ ರಾಜ್ಯ ಸರ್ಕಾರ ಅನುದಾನ ಕೊಟ್ಟಿದೆ. ಬರಗಾಲ ಘೋಷಿತ ಭಾಗದ ರೈತರಿಗೆ 2 ಸಾವಿರ ಇನ್ ಪುಟ್ ಸಬ್ಸಿಡಿ ಘೋಷಿಸಿದೆ. ರಾಜ್ಯ ಸರ್ಕಾರ 2023-24ರ ಅವಧಿಯಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ಸಾಲ ವಿತರಿಸುವ ಕೆಲಸವು ಪ್ರಗತಿಯಲ್ಲಿದೆ ಎಂದು ರಾಜ್ಯ ಸರ್ಕಾರದ ಕಾರ್ಯಗಳ ಮಾಹಿತಿ ನೀಡಿದರು.
ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಹಠಾತ್ ಹೃದಯಾಘಾತ ಮರಣ ತಡೆಗಟ್ಟಲು ಕ್ರಮವಹಿಸಲಾಗಿದೆ. ಸರ್ಕಾರವೇ ರಾಜ್ಯದಲ್ಲಿ ಒಟ್ಟು 169 ಡಯಾಲಿಸಿಸ್ ಕೇಂದ್ರಗಳನ್ನು ತೆರೆದು ಉಚಿತ ಸೇವೆ ನೀಡುತ್ತಿದೆ. 108 ಆರೋಗ್ಯ ಕವಚ ಯೋಜನೆಯಡಿ ತುರ್ತು ಆ್ಯಂಬುಲೆನ್ಸ್ ಸೇವೆಗೆ ಹೊಸ 262 ಆ್ಯಂಬುಲೆನ್ಸ್ ಸೇರಿಸಿದೆ ಎಂದರು.
ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಉತ್ತೇಜಿಸಲು ಬ್ರ್ಯಾಂಡ್ ಬೆಂಗಳೂರು ಯೋಜನೆ ಜಾರಿ ಮಾಡಲಾಗಿದೆ. ಬೆಂಗಳೂರಲ್ಲಿ ಸುಸ್ಥಿರ ಸಂಚಾರಕ್ಕಾಗಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಅನುದಾನ ಕೊಟ್ಟಿದೆ. ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಿಸುವ ಕೆಲಸವನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ/ಪಂಗಡ ಸಮುದಾಯಗಳ ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಅಡಿ 133 ಕೋಟಿ ಸಾಲ ಒದಗಿಸಲಾಗಿದೆ ಎಂದರು.