ಗುಜರಾತ್: ವಡೋದರಾದ ಹರ್ನಿ ಸರೋವರದಲ್ಲಿಭಾರೀ ದುರಂತವೊಂದು ಸಂಭವಿಸಿದೆ. ಪ್ರವಾಸಕ್ಕೆ ಅಂತ ಬಂದು ಬೋಟಿಂಗ್ ಎಂಜಾಯ್ ಮಾಡುತ್ತಿದ್ದ ಶಾಲಾ ಮಕ್ಕಳು ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೋಟಿಂಗ್ ಮಾಡುತ್ತಿದ್ದಾಗಲೇ ಬೋಟ್ ಮುಳುಗಿದ್ದು, 16 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಜೊತೆಗೆ ಇಬ್ಬರು ಶಿಕ್ಷಕರೂ ಸಹ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ದುರಂತದಲ್ಲಿ ಕೆಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಅವರಿಗೆ ಶೋಧಕಾರ್ಯ ನಡೆಸಲಾಗುತ್ತಿದೆ.
ಇಂದು ಸಂಜೆ ಶಿಕ್ಷಕರೊಂದಿಗೆ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಸುಮಾರು 23 ಶಾಲಾ ವಿದ್ಯಾರ್ಥಿಗಳು ಬೋಟಿಂಗ್‌ಗೆ ತೆರಳಿದ್ದರು. ಆದರೆ ವರಲ್ಲಿ 50% ಮಾತ್ರ ಲೈಫ್ ಜಾಕೆಟ್‌ಗಳನ್ನು ಹೊಂದಿದ್ದರು” ಎಂದು ಮೂಲಗಳು ತಿಳಿಸಿವೆ.
ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ (ವಿಎಂಸಿ) ವ್ಯಾಪ್ತಿಗೆ ಬರುವ ಈ ಕೆರೆಯು ಖಾಸಗಿ ಕಂಪನಿಯೊಂದಕ್ಕೆ ಬೋಟಿಂಗ್ ಗುತ್ತಿಗೆ ನೀಡಿತ್ತು. ಬೋಟ್‌ನ ಸಾಮರ್ಥ್ಯ 10 ರಿಂದ 12 ಮಕ್ಕಳಿದ್ದರೂ ಒಂದೇ ಬೋಟ್‌ನಲ್ಲಿ 20 ರಿಂದ 25 ಮಕ್ಕಳನ್ನು ಕೂರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಘಟನೆಯಲ್ಲಿ ಹತ್ತು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ನಂತರ 13 ಕ್ಕೂ ಹೆಚ್ಚು ಮಕ್ಕಳನ್ನು ಚಿಕಿತ್ಸೆಗಾಗಿ SSG ಆಸ್ಪತ್ರೆಗೆ (ಸರ್ ಸಯಾಜಿರಾವ್ ಜನರಲ್ ಆಸ್ಪತ್ರೆ) ದಾಖಲಿಸಲಾಗಿದೆ.
ಇನ್ನು ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.