ದೆಹಲಿ, ಜನವರಿ : ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮೂಲಕ ಜನವರಿ 19 ರಿಂದ 31ರ ವರೆಗೆ ನಡೆಯಲಿರುವ ‘ಖೇಲೋ ಇಂಡಿಯಾ ಯೂತ್ ಗೇಮ್ಸ್’ಗೆ ಆಹ್ವಾನಿಸಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಎಂ ಎಂಕೆ ಸ್ಟಾಲಿನ್ ಅವರ ಕೋರಿಕೆ ಮೇರೆಗೆ ತಮಿಳುನಾಡಿನ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರದ ಪರವಾಗಿ ಉದಯನಿಧಿ ಸ್ಟಾಲಿನ್ ಪ್ರಧಾನಿಗೆ ಮನವಿ ಮಾಡಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.