ಜುಲೈ 27ರ ಸಂಜೆ ಹಳೆ ರಾಜಿಂದರ್ ನಗರ್ ನಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ತರಬೇತಿ ಕೇಂದ್ರಕ್ಕೆ ಪ್ರವಾಹದ ನೀರು ನುಗ್ಗಿದ್ದರಿಂದ ಮೃತಪಟ್ಟ ವಿದ್ಯಾರ್ಥಿಗಳಾದ ಶ್ರೇಯಾ ಯಾದವ್,ತನ್ಯಾ ಸೋನಿ ಹಾಗೂ ನೆವಿನ್ ಡೆಲ್ವಿನ್ ಸಾವಿನ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಶುಕ್ರವಾರ ಆರನೆಯ ದಿನಕ್ಕೆ ತಲುಪಿದೆ.
ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಐಎಎಸ್ ಆಕಾಂಕ್ಷಿ ಗೌತಮ್ ಎಂಬ ವಿದ್ಯಾರ್ಥಿಯು, “ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ. ವ್ಯಾಸಂಗ ಕೂಡಾ ನಮಗೆ ಮುಖ್ಯವಾಗಿದೆ. ಹೀಗಾಗಿ ಪ್ರತಿಭಟನಾ ಸ್ಥಳದಲ್ಲಿ ಕುಳಿತಿರುವ ವಿದ್ಯಾರ್ಥಿಗಳು ವ್ಯಾಸಂಗ ಸಾಮಗ್ರಿಗಳನ್ನು ಇಲ್ಲಿಗೆ ತಂದಿದ್ದಾರೆ” ಎಂದು ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಇತರರು ದಿನಪತ್ರಿಕೆಗಳು ಹಾಗೂ ವ್ಯಾಸಂಗ ಸಾಮಗ್ರಿಗಳನ್ನು ಒದಗಿಸುವ ಮೂಲಕ ನಮಗೆ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದರು