ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರು ಮಾಜಿ ಸಚಿವ ಮಾಧುಸ್ವಾಮಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ ಎಂದಿರುವ ಬಸವರಾಜು, ಮಾಜಿ ಸಚಿವ ಸೋಮಣ್ಣ ಅವರ ಹೆಸರನ್ನು ನಾನು ಪ್ರಸ್ತಾಪಿಸಿದ್ದೇನೆ. ಸೋಮಣ್ಣ ತುಮಕೂರಿಗೆ ಹೊರಗಿನವರಲ್ಲ, ಅವರು ಒಳ್ಳೆಯ ಕೆಲಸಗಾರ ಎಂದು ಹೊಗಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ.
ಅವರಲ್ಲಿ ಹೆಚ್ಚಿನ ಅನುಭವ ಇರುವವರು ಸೋಮಣ್ಣ. ಹಾಗಾಗಿ ನಾನು ಅವರ ಹೆಸರು ಪ್ರಸ್ತಾಪಿಸಿದ್ದೇನೆ. ಸೋಮಣ್ಣ ಹೊರಗಿನವರಲ್ಲ, ತುಮಕೂರಿಗೆ ಸೇರಿದವರೇ ಆಗಿದ್ದಾರೆ. ಮೂರು ಬಾರಿ ತುಮಕೂರು ಜಿಲ್ಲಾ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ನನ್ನ ಗೆಲುವಿಗೆ ಅವರು ಶ್ರಮಿಸಿದ್ದಾರೆ. ಅವರು ಈ ಕ್ಷೇತ್ರಕ್ಕೆ ಬಂದರೆ ಒಳ್ಳೆಯದು. ಸೋಮಣ್ಣ ಕೆಲಸಗಾರ, ಕೆಲಸಗಾರನಿಗೆ ಅವಕಾಶ ಕೊಡಬೇಕು. ಅವರು ಹೇಗೆ ಕೆಲಸ ಮಾಡಿದ್ದಾರೆಂದು ಬೆಂಗಳೂರಿನ ಗೋವಿಂದರಾಜು ನಗರವನ್ನು ಹೋಗಿ ಒಂದು ಸಲ ನೋಡಿ ಬನ್ನಿ ಎಂದರು.
ವೈಯಕ್ತಿಕವಾಗಿ ಅವರು ನನಗೆ ಹಿಡಿಸಲಿಲ್ಲ. ನಾನು ಆ ರೀತಿ ಮಾಡಿಲ್ಲ ಅಂತ ಮಾಧುಸ್ವಾಮಿ ಬಂದು ಸಾಯಿಬಾಬನ ಮುಂದೆ ಹೇಳಲಿ. ದೇವರ ಮುಂದೆ ನಾನು ಹೇಳುತ್ತೇನೆ. ಮಾಧುಸ್ವಾಮಿ ಉದ್ಧಟತನದ ವ್ಯಕ್ತಿ ಎಂದರು. ಮಾಧುಸ್ವಾಮಿ ಮಂತ್ರಿಯಾಗಿ ಎರಡು ದಿನ ಆಗಿತ್ತು. ಮೂರನೇ ದಿನಕ್ಕೆ ನಾನು ಅವರ ಆಫೀಸ್ ಗೆ ಹೋಗಿದ್ದೆ. 15, 20 ನಿಮಿಷ ಅವರ ಆಫೀಸ್ ನಲ್ಲಿ ಕಾದು ಕುಳಿತೆ. ನನ್ನ ಕಂಡರೂ ಮಾತನಾಡಿಸಲಿಲ್ಲ. ಆವತ್ತೇ ಕೊನೆ, ನಾನೆಂದೂ ಅವರ ಆಫೀಸ್ ಗೆ ಮತ್ತೆ ಹೋಗಲಿಲ್ಲ. ಒಬ್ಬ ಸೀನಿಯರ್ ಎಂ.ಪಿ ಅವರ ಕಚೇರಿಗೆ ಹೋದರೆ ಮಾತನಾಡಿಸಲಿಲ್ಲವೆಂದರೆ ಅವರು ಯಾವ ರೀತಿಯ ವ್ಯಕ್ತಿ ಎಂದು ನೀವೇ ತಿಳಿದುಕೊಳ್ಳಿ.