ಬೆಂಗಳೂರು: ಸಂಸದ ಪ್ರತಾಪ್ ಸಿಂಹ (Pratap Simha) ಸಹೋದರ ವಿಕ್ರಂ ಸಿಂಹ (Vikram Simha) ಮರ ಕಡಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ಕುಮಾರಸ್ವಾಮಿ (HD Kumaraswamy) ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದರು.
ವಿಕ್ರಂ ಸಿಂಹ ತಪ್ಪಿಲ್ಲದಿದ್ದರೂ ಆರೋಪ ಮಾಡಲಾಗುತ್ತಿದೆ ಅಂತ ಗುಡುಗಿದ್ದರು. ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಎಚ್‌ಡಿಕೆ, ಮತ್ತೆ ಪ್ರತಾಪ್ ಸಿಂಹ ಹಾಗೂ ಅವರ ಸಹೋದರನ ಬೆಂಬಲಕ್ಕೆ ನಿಂತಿದ್ದಾರೆ. “ಮೈಸೂರು (Myosre) ಲೋಕಸಭೆ (Lok Sabha) ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಅದರ ಹಿಂದಿರುವ ಸಿದ್ಧಸೂತ್ರದಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ” ಅಂತ ಸಿಎಂ ಸಿದ್ದರಾಮಯ್ಯರಿಗೆ (Siddaramaiah) ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕದ ‘ನೀರೋ’ಗೆ ರಾಜಕೀಯ ಊಳಿಗ ಮಾಡುತ್ತಿರುವ ಗೃಹಮಂತ್ರಿ ಡಾ. ಜಿ ಪರಮೇಶ್ವರ ಮತ್ತು ಸಿದ್ದಹಸ್ತರು ಹೇಳಿದ್ದಕ್ಕೆಲ್ಲ ‘ಪರಿಪೂರ್ಣ ಸಹಕಾರ’ ಕೊಡುವ ಹಾಸನ ಜಿಲ್ಲಾ ಉಸ್ತುವಾರಿ ಕೆಎನ್ ರಾಜಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಪ್ರಕರಣಕ್ಕೆ ಸಂಬಂಧಿಸಿ ನಾನು ಕೊಟ್ಟಿರುವ ಹೇಳಿಕೆಗಳಿಗೆ ನೀಡಿದ ಪ್ರತಿಕ್ರಿಯೆ ಗಮನಿಸಿದ್ದೇನೆ ಅಂತ ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ ಈ ಸಚಿವರಿಬ್ಬರು. ‘ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ’ ಅನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ತಪ್ಪಿದರೆ, ಸತ್ಯದ ಪರ ನಿಲ್ಲುವ ಗಂಡಸ್ತನ ನಮಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನಾದರೂ ತೋರಬೇಕು ಅಂತ ಎಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ.