ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಗುರುವಾರ ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರ್ ನೆರವೇರಿತು. ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕ ದರ್ಬಾರ್ಗೆ ಹಾಜರಾದರು.
ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾರ್ವಜನಿಕ ಪರ್ಯಾಯ ದರ್ಬಾರ್ನಲ್ಲಿ ಅನೇಕ ರಾಜಕೀಯ ಮುಖಂಡರೂ ಭಾಗವಹಿಸಿದರು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣವನ್ನು ಸಂಕೇತಿಸುವ ಟ್ಯಾಬ್ಲೋ ಸೇರಿದಂತೆ ಹತ್ತಾರು ಟ್ಯಾಬ್ಲೋಗಳು ಗಮನ ಸೆಳೆದವು.
ಸ್ಪೀಕರ್ ಯು.ಟಿ ಖಾದರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜಕೀಯ ನಾಯಕರ ಜತೆ ಸ್ಥಳೀಯ ಶಾಸಕರೂ ಭಾಗಿಯಾದರು.
ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಇತರ ಮಠಗಳ ಶ್ರೀಗಳು ಗೈರಾಗುತ್ತಿದ್ದಾರೆ. ಇದರೊಂದಿಗೆ 2008ರ ಇತಿಹಾಸ ಪುನರಾವರ್ತನೆಯಾದಂತಾಗಿದೆ.
ಏನಿದು ಉಡುಪಿ ಪರ್ಯಾಯ?: ಉಡುಪಿಯ ಕೃಷ್ಣ ದೇಗುಲದಲ್ಲಿ 8 ಮಠಗಳು ಇದ್ದು, ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದ ವೇಳೆ ಎರಡು ವರ್ಷಗಳ ಕಾಲ ಕೃಷ್ಣನ ಸೇವೆ ಮಾಡುವ ಜವಾಬ್ದಾರಿಯನ್ನು ಮತ್ತೊಂದು ಮಠಕ್ಕೆ ಬಿಟ್ಟುಕೊಡಲಾಗುತ್ತದೆ. ಸರದಿಯಂತೆ ಅಷ್ಟ ಮಠಗಳ ಯತಿಗಳು ಎರಡು ವರ್ಷ ಕಾಲ ಶ್ರೀಕೃಷ್ಣನ ಪೂಜೆ, ಸೇವೆ ಮಾಡುತ್ತಾ ಬರುತ್ತಾರೆ.