ದೆಹಲಿ: 2024ರ ಲೋಕಸಭಾ ಚುನಾವಣೆ (Lok Sabha election 2024) ನಡೆಯುವುದು ಯಾವಾಗ? ಏಪ್ರಿಲ್ ತಿಂಗಳಲ್ಲೋ? ಮೇ ತಿಂಗಳಲ್ಲೋ? ಈ ಎಲ್ಲಾ ಗೊಂದಲಗಳು ಎಲ್ಲಾ ಸಾರ್ವಜನಿಕರ ತಲೆಯಲ್ಲೂ ಇವೆ. ಈ ಎಲ್ಲಾ ಪ್ರಶ್ನೆಗಳಿಗೆ ಇದೇ ವಾರ ಉತ್ತರ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ವಾರ ಕೇಂದ್ರ ಚುನಾವಣಾ ಆಯೋಗವು (Central Election Commission) ಸುದ್ದಿಗೋಷ್ಠಿ ನಡೆಸಿ, ಲೋಕಸಭಾ ಚುನಾವಣಾ ದಿನಾಂಕವನ್ನು (Lok Sabha election date) ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಾರವೇ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿ, ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದುಕೊಂಡಂತೆ ಆದರೆ ಇದೇ ಮಾರ್ಚ್ 14 ಅಥವಾ ಮಾರ್ಚ್ 15ರಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸೆಪ್ಟೆಂಬರ್ 30 ಒಳಗೆ ಅಲ್ಲಿ ಚುನಾವಣೆ ನಡೆಸಲೇಬೇಕು ಅಂತ ಸುಪ್ರೀಂ ಕೋರ್ಟ್ ಡೆಡ್‌ಲೈನ್ ಕೊಟ್ಟಿದೆ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯ ಜೊತೆಗೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ನಡೆಸಬೇಕೆ ಎಂಬ ಬಗ್ಗೆಯೂ ಕೇಂದ್ರ ಚುನಾವಣಾ ಆಯೋಗ ಸಭೆ ನಡೆಸಲಿದೆ.