ಹಾಸನ : ರಾಜ್ಯಾದ್ಯಂತ ಮುಂಗಾರು ಮಳೆಯು ಚುರುಕುಗೊಂಡಿದ್ದು, ಭರ್ಜರಿ ಸಿಡಿಲು ಸಹಿತ ಮಳೆಯಾಗುತ್ತಿದೆ. ಅದರಂತೆ ಇಂದು ಒಂದೇ ದಿನ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ.
ಇಂದು ಮಧ್ಯಾಹ್ನದ ವೇಳೆ ಜೋಳ ಬಿತ್ತನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆ ಬಂದಿದ್ದು, ಈ ಹಿನ್ನಲೆ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಈ ವೇಳೆ ಸಿಡಿಲು ಬಡಿದು ಕೂಲಿ ಕಾರ್ಮಿಕರಾದ ಮುತ್ತಮ್ಮ(70) ಹಾಗೂ ಪುಟ್ಟಮ್ಮ(63) ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಶಾಸಕ ಎ.ಮಂಜು ಭೇಟಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಭಾಗದಲ್ಲಿ ಇಂದು(ಜೂ.05) ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಬಬಲೇಶ್ವರದ ಕಾಖಂಡಕಿ ಗ್ರಾಮದ ಸಿಡಿಲಿಗೆ ಕುರಿಗಾಹಿ ಅಮೋಘ ಸೋಮನಿಂಗ ಕಣಮುಚನಾಳ (35) ಎಂಬಾತ ಸೇರಿ 15 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮಳೆ ಬರುತ್ತಿದ್ದ ವೇಳೆ ಕುರಿಗಾಹಿ, ಕುರಿಗಳೊಂದಿಗೆ ಮರದ ಕೆಳೆಗೆ ನಿಂತಿದ್ದ. ಈ ಸಂದರ್ಭದಲ್ಲಿ ಮರಕ್ಕೆ ದಿಢೀರ್ ಸಿಡಿಲು ಬಡಿದು ಈ ದುರ್ಘಟನೆ ನಡೆದಿದೆ. ಈ ಘಟನೆ ಬಬಲೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.