ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಓಡಾಟ ನಡೆಸುವ ಬಿಎಂಟಿಸಿ ಬಸ್ ತಮ್ಮ ಸೇವೆಗೆ ತಕ್ಕಂತೆ ಶಿಸ್ತನ್ನು ಕಾಪಾಡಿಕೊಳ್ಳುತ್ತಾ ಬಂದಿದೆ.
ರಾಜ್ಯ ಸರಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ತೊಡಕು ಉಂಟಾಗದಂತೆ ಕ್ರಮ ಕೈಗೊಳ್ಳುತ್ತಾ ಬಂದಿದೆ
ನಿಯಮ ಉಲ್ಲಂಘನೆ ಕಂಡು ಬಂದಲ್ಲಿ, ದಂಡ ವಿಧಿಸಿ ಕ್ರಮ ಕೈಗೊಳ್ಳುತ್ತಿದೆ. ಹೀಗೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಒಟ್ಟಾರೆ 7.37 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ.
ಮಹಿಳೆಯರಿಗೆ ಮೀಸಲಿರಿಸಿದ್ದ ಆಸನದಲ್ಲಿ ಕೂತಿದ್ದ 347 ಪುರುಷರಿಂದ 34,700 ರೂಪಾಯಿ ದಂಡವನ್ನು ಸಂಗ್ರಹಿಸಿದೆ.
ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿ ಜಾಗೃತ ದಳವು 16,785 ಸಂಚಾರಗಳನ್ನು ತಪಾಸಣೆ ನಡೆಸಿ ವಿವಿಧ ಪ್ರಮಾಣದ ನಿಯಮ ಉಲ್ಲಂಘನೆ ಪತ್ತೆ ಹಚ್ಚಿ ದಂಡದ ಮೊತ್ತವನ್ನು 7.37 ಲಕ್ಷ ರೂಪಾಯಿವರೆಗೆ ಸಂಗ್ರಹಿಸಿದೆ. ವಿಶೇಷವಾಗಿ 3,502 ಟಿಕೆಟ್ ರಹಿತ ಪ್ರಯಾಣಿಕರಿಂದ 7.02 ಲಕ್ಷ ಮೊತ್ತ ಸಂಗ್ರಹಿಸಿದೆ