ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದಾಗಿನಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಸಮಸ್ಯೆ ಹೆಚ್ಚಾಗುತ್ತಿದೆ.
ಮೋದಿ ಹಾಗೂ ಭಾರತದ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಮೇಲೆ ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಎಂದು ಕಳೆದ ಮೂರು ದಿನಗಳಿಂದ ಟ್ರೆಂಡ್ ಆಗುತ್ತಿವೆ.
ಕೆಲವರು ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ರದ್ದು ಮಾಡುತ್ತಿದ್ದಾರೆ. ಜೊತೆಗೆ ಮಾಲ್ಡೀವ್ಸ್ ಬದಲಿಗೆ ಲಕ್ಷದ್ವೀಪಕ್ಕೆ ಹೋಗುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಹೋಗುವಂತೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಸಲಹೆ ನೀಡುತ್ತಿದ್ದಾರೆ. ಭಾರತದಿಂದ ಮಾಲ್ಡೀವ್ಸ್ಗೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ.
ಚೀನಾ ಪ್ರವಾಸಕ್ಕೆ ತೆರಳಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜ್ಜು ಐದು ದಿನಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ.
ಚೀನಾದಿಂದ ಹೆಚ್ಚಿನ ಪ್ರವಾಸಿಗರನ್ನು ಮಾಲ್ಡೀವ್ಸ್ಗೆ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮಾಲ್ಡೀವ್ಸ್ ಬ್ಯುಸಿನೆಸ್ ಫೋರಂನ ಸಭೆಯಲ್ಲಿ ಭಾಗವಹಿಸಿದ ಅವರು ಈ ಕುರಿತು ಚೀನಾ ಸರ್ಕಾರವನ್ನು ಕೋರಿದ್ದಾರೆಂದು ಮಾಲ್ಡೀವ್ಸ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.