ಮೈಸೂರು: ಮೈಸೂರು-ಕೊಡಗು (Mysuru-kodagu) ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಇಂದು ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಒಡೆಯರ್ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು.
ನಾಮಪತ್ರ ಸಲ್ಲಿಕೆ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಪುತ್ರನಿಗೆ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಒಡೆಯರ್ 5 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ತಮ್ಮ ಒಡೆತನದಲ್ಲಿ ಯಾವುದೇ ಮನೆ, ಕೃಷಿ ಭೂಮಿ, ನಿವೇಶನ ಹೊಂದಿಲ್ಲವೆಂದು ಯದುವೀರ್ ಒಡೆಯರ್ ಅಫಿಡವಿಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಕೈಯಲ್ಲಿ 1 ಲಕ್ಷ ರೂಪಾಯಿ ನಗದು ಹೊಂದಿರುವ ಯದುವೀರ್ ಒಡೆಯರ್, ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ 1.36 ಕೋಟಿ ರೂ. ಹೊಂದಿದ್ದಾರೆ. ಇದರ ಜೊತೆಗೆ 3.25 ಕೋಟಿ ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂಪಾಯಿ ಚರಾಸ್ತಿಯನ್ನು ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಒಡೆಯರ್ ಘೋಷಿಸಿಕೊಂಡಿದ್ದಾರೆ.