ದಕ್ಷಿಣ ಕನ್ನಡ: ರಂಝಾನ್ (Ramzan) ತಿಂಗಳಲ್ಲಿ ಸಂಜೆಯಾಗುತ್ತಲೇ ಇಫ್ತಾರ್ ಸಂಭ್ರಮ ಕಂಡು ಬರೋದು ಸಹಜ. ಆದ್ರೆ, ಭಾನುವಾರ ಸಂಜೆ ಈ ಮಸೀದಿಯಲ್ಲಿ ನಡೆದ ಇಫ್ತಾರ್ ಅದೆಲ್ಲಕ್ಕೂ ಭಿನ್ನ. ಕಾರಣ, ಕೋಮುಸೂಕ್ಷ್ಮ ಅಂತಾ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯೊಂದು ಮಾದರಿ ಇಫ್ತಾರ್ (Ifthar) ಕೂಟಕ್ಕೆ ಸಾಕ್ಷಿಯಾಯಿತು. ಊರ ದೈವಸ್ಥಾನವೊಂದು (Hindu Temple) ಮಸೀದಿಯಲ್ಲಿ ಇಫ್ತಾರ್ ಆಯೋಜಿಸಿ ಭಾವೈಕ್ಯತೆಗೆ ಹೊಸ ಷರಾ ಬರೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು. ಇಲ್ಲಿನ ಕೆದಿಲ ಶ್ರೀಉಳ್ಳಾಕ್ಲು ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿ ತನ್ನೂರಿನ ಮಸೀದಿಯಲ್ಲಿ ಉಪವಾಸ ವೃತಾಚರಣೆಯಲ್ಲಿರುವ ಮುಸ್ಲಿಂ ಸಮುದಾಯದವರಿಗಾಗಿ ಇಫ್ತಾರ್ ಕೂಟ ಆಯೋಜಿಸಿತ್ತು. ಈ ಕ್ಷಣಕ್ಕೆ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯ ಎಲ್ಲ ಸದಸ್ಯರ ಜೊತೆಗೆ ದೈವಸ್ಥಾನದ ಪ್ರಮುಖರು ಕೂಡಾ ಸಾಕ್ಷಿಯಾದರು.