ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆತಂದು ಸಾಯಿಸಿದ ಆರೋಪ ದರ್ಶನ್ ಮೇಲಿದೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕಾಗಿ ರೇಣುಕಾ ಸ್ವಾಮಿಯನ್ನು ಅಪಹರಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ಆತನ ಮೇಲೆ ಹಲ್ಲೆ ಮಾಡಲಾಯಿತು. ಕೊಲೆ ನಡೆದ ಬಳಿಕ ರೇಣುಕಾ ಸ್ವಾಮಿಯ ಶವವನ್ನು ರಾಜಕಾಲುವೆಗೆ ಎಸೆಯಲಾಯಿತು.
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇತರ 13 ಆರೋಪಿಗಳ ಜೊತೆ ಹೊಸದಾಗಿ ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಜನರ ಹೆಸರಗಳು ಕೇಳಿಬಂದಿವೆ. ಇವರೆಲ್ಲ ಸದ್ಯಕ್ಕೆ ನಾಪತ್ತೆ ಆಗಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾಳೆ. ದರ್ಶನ್ ಎ2 ಹಾಗೂ ಕೆ.ಪವನ್ ಎ3 ಆಗಿದ್ದಾನೆ. ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17 ಎಂದು ಕೇಸ್ ದಾಖಲಾಗಿದೆ. 13 ಮಂದಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಯಲಿದೆ. ಯಾರು ಎಷ್ಟೇ ದೊಡ್ಡವರಿದ್ರೂ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕೇ ಸಿಗುತ್ತೆ ಎಂದಿದ್ದಾರೆ.
ಚಿತ್ರದುರ್ಗದ ಮುರುಘಾಮಠದ ಉಸ್ತುವಾರಿ ಬಸವಪ್ರಭುಶ್ರೀ ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಬಸವಪ್ರಭುಶ್ರೀ ಬಳಿ ರೇಣುಕಾಸ್ವಾಮಿ ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ. ತನಿಖೆ ಆಗುತ್ತಿದೆ ನಿಮಗೆ ನ್ಯಾಯ ಸಿಗುತ್ತದೆ ಧೈರ್ಯವಾಗಿರಿ ಎಂದು ಶ್ರೀಗಳು ಹೇಳಿದ್ದಾರೆ.
ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ದರ್ಶನ್ ವರ್ತನೆ ಬೇರೆಯೇ ಇದೆ. ಅವರ ವರ್ತನೆ ಕೀಳುಮಟ್ಟದ್ದು ಮತ್ತು ಅಮಾನುಷ ಎಂದು ಕಿಡಿಕಾರಿದ್ದಾರೆ.