ಉಡುಪಿ: ಇನ್ಸ್ಟಾಗ್ರಾ ಮ್‌ನಲ್ಲಿ 90 ಸಾವಿರ ಫಾಲೋವರ್ಸ್ ಹೊಂದಿ ಖ್ಯಾತಿ ಗಳಿಸಿದ್ದ ಉಡುಪಿಯ ಅಂಬಲಪಾಡಿ ಗಾಂಧಿನಗರದ ಕಂಟೆಂಟ್ ಕ್ರಿಯೇಟರ್ ಅಶ್ವಿನಿ ಶೆಟ್ಟಿ ನಿಧನರಾಗಿದ್ದಾರೆ. ಮನೆಯಲ್ಲಿ ಕಳೆದ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 43 ವರ್ಷದ ಅಶ್ವಿನಿ ಶೆಟ್ಟಿ ಇಂದು (ಜುಲೈ 16) ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಅಗ್ನಿ ದುರಂತದಲ್ಲಿ ಇವರ ಇಬ್ಬರು ಮಕ್ಕಳಾದ ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ರಕ್ಷಿಸಲ್ಪಟ್ಟಿದ್ದರು. ದಟ್ಟ ಹೊಗೆಯಿಂದ ಪಾರಾಗಲು ಇವರು ಕೂಡಲೇ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿ ಜೀವ ಉಳಿಸಿಕೊಂಡಿದ್ದರು.
ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ದುರಂತ ಉಂಟಾಗಿತ್ತು. ಇದರಿಂದ ಮನೆಯೊಳಗೆ ಬೆಂಕಿ ಜೊತೆ ದಟ್ಟ ಹೊಗೆ ಆವರಿಸಿತ್ತು. ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಉದ್ಯಮಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.