ವಾಷಿಂಗ್ಟನ್ :ಅಮೆರಿಕದಲ್ಲಿ (United States) ಪೊಲೀಸ್ ಅಧಿಕಾರಿಯೊಬ್ಬರ ಕಾರು ಡಿಕ್ಕಿಯಾಗಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ (Jaahnavi Kandula) ಕುಟುಂಬದವರಿಗೆ ನ್ಯಾಯ ಒದಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಭಾರತೀಯ ರಾಯಭಾರಿ (Indian Consulate) ಕಚೇರಿ ಭರವಸೆ ನೀಡಿದೆ.
ಆಂಧ್ರಪ್ರದೇಶ ಮೂಲದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ, 23 ವರ್ಷ ವಯಸ್ಸಿನ ಜಾಹ್ನವಿ, ಸಿಯಾಟಲ್ ಪೊಲೀಸ್ ಅಧಿಕಾರಿಯ ಕಾರು ಡಿಕ್ಕಿಯಾಗಿ ಕಳೆದ ವರ್ಷ ಜನವರಿಯಲ್ಲಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಅಮೆರಿಕ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿದೆ.
ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರುವುದು, ಬೇರೆ ದೇಶಗಳಲ್ಲಿ ಕಾನೂನಾತ್ಮಕವಾಗಿ ಸಮಸ್ಯೆಯಲ್ಲಿ ಸಿಲುಕಿಹಾಕಿಕೊಂಡವರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಕಳೆದ ಕೆಲವು ವರ್ಷಗಳಿಂದ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಅನೇಕ ಸಂತ್ರಸ್ತರಿಗೆ ಪ್ರಯೋಜನಗಳಾಗಿವೆ. ಅದೇ ರೀತಿ ಇದೀಗ ಆಂಧ್ರ ಮೂಲದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಲು ಭಾರತ ಮುಂದಾಗಿದೆ.