ಬಾಗಲಕೋಟೆ : ತಾಲ್ಲೂಕಿನ ಯಡಳ್ಳಿ ತೋಟದ ವಸತಿ ಪ್ರದೇಶದಲ್ಲಿ ಐವತ್ತು ಕುಟುಂಬ ವಾಸ ಮಾಡುತ್ತಾರೆ. ಹೊಲದಲ್ಲೇ ಇವರ ಕೆಲಸ, ಅಲ್ಲೇ ಬದುಕು. ಆದರೆ, ಇವರ ಬದುಕು ರಾತ್ರಿ ಕತ್ತಲಲ್ಲಿ ಕನವರಿಸುವಂತಾಗಿದೆ. ಹೌದು, ಇವರ ಮನೆಗಳಿಗೆ ಗೃಹಜ್ಯೋತಿ ನಿರಂತರ ವಿದ್ಯುತ್(Electricity) ಭಾಗ್ಯವಿಲ್ಲ. ಇದರಿಂದ ಮನೆಯಲ್ಲಿ ಅಡುಗೆ ಮಾಡುವಾಗ , ಊಟ ಮಾಡುವಾಗ ಮಕ್ಕಳು ವಿದ್ಯಾಭ್ಯಾಸ ಮಾಡುವಾಗ ಕತ್ತಲಲ್ಲೆ ಕಾಲ ಕಳೆಯಬೇಕಾಗಿದೆ. ಸರಿಯಾಗಿ ಓದಲು ಆಗದೆ ಮಕ್ಕಳು ಪರದಾಡುವಂತಾಗಿದೆ. ರಾತ್ತಿ ತಮಗಾಗುವ ಕಷ್ಟ ನೆನೆದೆ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಅವರು ಹೊಲದಲ್ಲಿ ಮನೆ ಮಾಡಿಕೊಂಡು ಕೃಷಿ ಮಾಡುವ ರೈತರು. ಹಗಲು -ರಾತ್ರಿ ಹೊಲದಲ್ಲೇ ಅವರ ವಾಸ. ಆದರೆ, ಈಗ ಅವರು ರಾತ್ರಿ ಕತ್ತಲಲ್ಲಿ ಬದುಕಬೇಕಾಗಿದೆ. ಗೃಹಜ್ಯೋತಿ ಅವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಬೆಳಕು ಕೊಡಿ ಎಂದು ಎಷ್ಟು ಮನವಿ ಮಾಡಿದರೂ ಯಾರು ಕೇರ್ಮಾಡಿಲ್ಲ. ಇದರಿಂದ ಆ ಜನರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.