ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಭಾರತೀಯರ (Indians) ಬಗ್ಗೆ ಅವಹೇಳನಕಾರಿ ಟ್ವೀಟ್ (Derogatory Remarks) ಮಾಡಿ ಕೋಟ್ಯಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಭಾನುವಾರ ಅಮಾನತುಗೊಳಿಸಿದೆ.
ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಮರಿಯುಂ ಶಿಯುನಾ, ಮಾಲ್ಶಾ ಮತ್ತು ಹಸನ್ ಜಿಹಾನ್ ಎಂಬ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿ ಕ್ರಮ ಕೈಗೊಂಡಿದೆ. ಸಚಿವರ ವೈಯಕ್ತಿಕ ಹೇಳಿಕೆ ಇಡೀ ಸರ್ಕಾರದ ಹೇಳಿಕೆಯಲ್ಲ ಎಂದಿದ್ದ ಸರ್ಕಾರ, ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಹಲವು ಸೆಲೆಬ್ರಿಟಿಗಳು ಮಾಲ್ಡೀವ್ಸ್ ಸಚಿವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದರ ಬೆನ್ನಲ್ಲೇ ಕೆಲವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಅವರು ಪ್ರತಿನಿಧಿಸುವುದಿಲ್ಲ ಎಂದು ಮಾಲೆ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.
ಮಾಲ್ಡೀವ್ಸ್ ಸಚಿವೆ ಮರಿಯಮ್ ಶೆಯುನಾ , ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಇಸ್ರೇಲಿ ಕೈಗೊಂಬೆ’ಗೆ ಎಂದು ಕರೆದಿದ್ದರು. ಉಳಿದ ಮಂತ್ರಿಗಳು ಭಾರತದ ಪ್ರವಾಸೋದ್ಯಮವನ್ನು ಮಾಲ್ಡೀವ್ಸ್ ಪ್ರವಾಸೋದ್ಯಮದೊಂದಿಗೆ ಹೋಲಿಸಿ ವ್ಯಂಗ್ಯಭರಿತ ಪೋಸ್ಟ್ಗಳನ್ನು ಮಾಡಿ ಅವಹೇಳನ ಮಾಡಿದ್ದರು. ಮಾಲ್ಡೀವ್ಸ್ ಸಚಿವರ ವಿವಾದಾತ್ಮಕ ಟ್ವೀಟ್ಗೆ ಭಾರತೀಯ ನೆಟಿಜನ್ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಲ್ಡೀವ್ಸ್ ಪ್ರವಾಸದ ಟಿಕೆಟ್ಗಳನ್ನು ರದ್ದುಗೊಳಿಸುತ್ತಿರುವ ಸ್ಕ್ರೀನ್ಶಾಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.