ಮನಾಮ : ಬಹರೈನ್: ಹಳೆಯ ಕನ್ನಡ ಚಿತ್ರಗೀತೆಗಳ ಸುಮಧುರ ಲೋಕದಲ್ಲಿ ಸಂಗೀತ ಪ್ರೇಮಿಗಳನ್ನು ಮಿಂದೆಬ್ಬಿಸಿದ ಬಹರೈನ್ ಕನ್ನಡ ಸಂಘದ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಅಮರ ಮಧುರ ಗೀತೆ – ಕನ್ನಡ ವೈಭವ 2026’ ಅಕ್ಟೋಬರ್ 29, 2026ರಂದು ಮನಾಮದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು. ಕನ್ನಡ ಚಿತ್ರರಂಗದ ಸುವರ್ಣಯುಗದ ಅಮರ ಗೀತೆಗಳು, ಭಾವಪೂರ್ಣ ಗಾಯನ, ಆಕರ್ಷಕ ನೃತ್ಯ ಪ್ರದರ್ಶನಗಳು ಹಾಗೂ ಗಣ್ಯರ ಉಪಸ್ಥಿತಿಯಿಂದ ಕಾರ್ಯಕ್ರಮವು ಸಂಗೀತ ಮತ್ತು ಸಾಂಸ್ಕೃತಿಕ ಸಂಭ್ರಮದ ಸುಂದರ ಸಂಗಮವಾಗಿ ಮೂಡಿಬಂತು.

ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಅನಿವಾಸಿ ಕನ್ನಡಿಗರ ನಡುವೆ ಜೀವಂತವಾಗಿರಿಸುವಲ್ಲಿ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಾರ್ಯಕ್ರಮ ಸಂಚಾಲಕರಾದ ಅಮರನಾಥ್ ರೈ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಾಯೋಜಕರು ಹಾಗೂ ಸದಸ್ಯರನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಅವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಹಾಗೂ ನಿರ್ಮಾಪಕ ಗುರುಕಿರಣ್ ಅವರ ಉಪಸ್ಥಿತಿ ಮತ್ತು ಅಮೋಘ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಅವರೊಂದಿಗೆ ಹೃದಯ್ ಕಿರಣ್, ಯುವ ಗಾಯಕ ಶಮೀರ್ ಮುಡಿಪು, ಯುವ ಗಾಯಕಿ ಸುವಿನ್ಯಾ ಆಚಾರ್ಯ, ಉದ್ಯಮಿ ಹಾಗೂ ಗಾಯಕ ಪ್ರಶಾಂತ್ ರೈ, ಕತಾರ್ನಿಂದ ಆಗಮಿಸಿದ ಅನಿಲ್ ಭಾಸಗಿ ಮತ್ತು ಪ್ರದೀಪ್ ಆಚಾರ್ಯ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ತಮ್ಮ ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಮೈಸೂರಿನ ಇತಿಹಾಸ ತಜ್ಞರು ಹಾಗೂ ‘ಮೈಸೂರಿನ ಕಥೆಗಳು’ ಯೂಟ್ಯೂಬ್ ಚಾನೆಲ್ ಖ್ಯಾತಿಯ ಧರ್ಮೇಂದ್ರ ಕುಮಾರ್ ಅವರು ತಮ್ಮ ವಿಚಾರಗಳು ಮತ್ತು ಅನುಭವಗಳ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ವೈಚಾರಿಕ ಆಯಾಮ ನೀಡಿದರು. ನ್ಯೂ ಮಂಗಳೂರು ಟೈಮ್ಸ್ ಪತ್ರಿಕೆಯ ಪತ್ರಕರ್ತ ಪೂರ್ಣ ಪ್ರಕಾಶ್ ಚಂದ್ರ ಹಾಗೂ ಉದ್ಯಮಿ ಪ್ರಶಾಂತ್ ರೈ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಖ್ಯಾತ ನಿರೂಪಕಿ ಹಾಗೂ ಬಿಗ್ FM 92.7 ಮಂಗಳೂರು ಮ್ಯೂಸಿಕ್ ಮ್ಯಾನೇಜರ್ ಆರ್.ಜೆ. ನಯನಾ ಶೆಟ್ಟಿ ಮತ್ತು ಕಮಲಾಕ್ಷ ಅಮೀನ್ ಅವರು ಸಹನಿರೂಪಕರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕನ್ನಡ ಸಂಘದ ಪ್ರತಿಭಾವಂತ ನೃತ್ಯಪಟುಗಳ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಸಂಗೀತ ಸಂಜೆಗೆ ಮತ್ತಷ್ಟು ರಂಗು ತುಂಬಿದವು.

1980 ಮತ್ತು 90ರ ದಶಕಗಳ ಜನಪ್ರಿಯ ಕನ್ನಡ ಚಿತ್ರಗೀತೆಗಳು ಸಭಿಕರನ್ನು ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ದವು. ಅರ್ಥಪೂರ್ಣ ಸಾಹಿತ್ಯ, ಇಂಪಾದ ಸಂಗೀತ ಮತ್ತು ಭಾವಪೂರ್ಣ ಗಾಯನದ ಮೂಲಕ ಕನ್ನಡ ಚಿತ್ರಸಂಗೀತದ ಶ್ರೀಮಂತ ಪರಂಪರೆ ಮತ್ತೊಮ್ಮೆ ಅನಾವರಣಗೊಂಡಿತು.
2007ರಲ್ಲಿ ಆರಂಭಗೊಂಡ ‘ಅಮರ ಮಧುರ ಗೀತೆ’ ಕಾರ್ಯಕ್ರಮವು ಹಳೆಯ ಕನ್ನಡ ಚಿತ್ರಗೀತೆಗಳ ಸೌಂದರ್ಯವನ್ನು ಅನಿವಾಸಿ ಕನ್ನಡಿಗರಿಗೆ ಪರಿಚಯಿಸುವುದರೊಂದಿಗೆ, ಹೊಸ ತಲೆಮಾರಿಗೆ ಕನ್ನಡ ಸಂಗೀತ ಪರಂಪರೆಯನ್ನು ತಲುಪಿಸುವ ಮಹತ್ವದ ವೇದಿಕೆಯಾಗಿದೆ.

ಕಾರ್ಯಕ್ರಮದ ಸಂದರ್ಭದಲ್ಲಿ ಅತಿಥಿ ಗಣ್ಯರು, ಕಲಾವಿದರು ಹಾಗೂ ಪ್ರಾಯೋಜಕರನ್ನು ಕನ್ನಡ ಸಂಘದ ವತಿಯಿಂದ ಗೌರವಿಸಲಾಯಿತು. ಗೌರವಿಸಲ್ಪಟ್ಟ ಗಣ್ಯರಲ್ಲಿ ಗುರುಕಿರಣ್, ಹೃದಯ್ ಕಿರಣ್, ಧರ್ಮೇಂದ್ರ ಕುಮಾರ್, ಪೂರ್ಣ ಪ್ರಕಾಶ್ ಚಂದ್ರ, ಪ್ರಶಾಂತ್ ರೈ, ಆರ್.ಜೆ. ನಯನಾ ಶೆಟ್ಟಿ, ಶಮೀರ್ ಮುಡಿಪು, ಸುವಿನ್ಯಾ ಆಚಾರ್ಯ ಹಾಗೂ ಶಿವಪಾಲ್ ಪ್ರಮುಖರು.

ಕಾರ್ಯಕ್ರಮಕ್ಕೆ ಮಹಾ ಪ್ರಾಯೋಜಕರಾಗಿ ಸಹಕರಿಸಿದ ಬಿ.ಎಂ.ಎಂ.ಐ. ಶಾಪ್ಸ್ ಸಂಸ್ಥೆಯ ಹಿರಿಯ ಸೇಲ್ಸ್ ಮ್ಯಾನೇಜರ್ ರಾಜೀವ್ ಮೆನನ್ ಹಾಗೂ ಖ್ಯಾತ ಉದ್ಯಮಿ ಮತ್ತು ಹಿರಿಯ ಸಮಾಜಸೇವಕ ಡಾ. ರೋನಾಲ್ಡ್ ಕುಲಾಸೋ (ಯುಎಇ) ಅವರ ಸಹಕಾರವನ್ನು ಸಂಘವು ಕೃತಜ್ಞತೆಯಿಂದ ಸ್ಮರಿಸಿ ಗೌರವಿಸಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರು ಹಾಗೂ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಅಮರನಾಥ್ ರೈ ಮತ್ತು ನಿರೂಪಣೆ ಹಾಗೂ ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದ ಕಮಲಾಕ್ಷ ಅಮೀನ್ ಅವರನ್ನು ಗೌರವಿಸಲಾಯಿತು.

ಪ್ರಾಯೋಜಕರು, ಕಲಾವಿದರು, ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಸಂಘದ ಸದಸ್ಯರ ಗಾಯನ ಹಾಗೂ ನೃತ್ಯವೈವಿಧ್ಯ ಸಭಿಕರನ್ನು ರಂಜಿಸಿತು.

ಹಳೆಯ ಕನ್ನಡ ಚಿತ್ರಗೀತೆಗಳ ಮಾಧುರ್ಯವನ್ನು ಮತ್ತೆ ಮನದಂಗಳದಲ್ಲಿ ಅರಳಿಸಿದ ‘ಅಮರ ಮಧುರ ಗೀತೆ’ ಸಂಗೀತ ಸಂಜೆ ಕನ್ನಡಿಗರಿಗೆ ಸವಿನೆನಪಿನ ಪಯಣವಾಯಿತು. ಸಂಗೀತದ ಮೂಲಕ ಕನ್ನಡ ಮನಸ್ಸುಗಳನ್ನು ಬೆಸೆಯುವ ಬಹರೈನ್ ಕನ್ನಡ ಸಂಘದ ಸಾಂಸ್ಕೃತಿಕ ಪಯಣಕ್ಕೆ ಈ ಕಾರ್ಯಕ್ರಮ ಮತ್ತೊಂದು ಮಧುರ ಅಧ್ಯಾಯವನ್ನು ಸೇರಿಸಿತು.
